ಸ್ಥಳೀಯ ಪತ್ರಿಕೆಗಳು ನಾಗರೀಕ ನಂಬಿಕೆಗಳನ್ನು ಗಟ್ಟಿಗೊಳಿಸುತ್ತಲೇ ಇದೆ : ಪತ್ರಕರ್ತ ಗಾರಾ.ಶ್ರೀನಿವಾಸ್
ಶಿವಮೊಗ್ಗ : ಮಾಧ್ಯಮಗಳ ವಿಶ್ಲೇಷಣೆಗಳನ್ನಾಗಲಿ ಅಥವಾ ಮೌಲ್ಯಧಾರಿತ ಪತ್ರಿಕೋದ್ಯಮದ ಬಗ್ಗೆ ವಿಮರ್ಶಿಸಿ ಸಭಿಕರಿಂದ ಚಪ್ಪಾಳೆ ತಟ್ಟಿಸಿಕೊಳ್ಳುವ ಭಾಷಣವನ್ನು ಮಾಡದೇ ಸುಧೀರ್ಘ ಹದಿನೈದು ವರ್ಷಗಳಲ್ಲಿನ ಪತ್ರಿಕಾ ಅನುಭವ ಹಾಗೂ ಅಧ್ಯಯನಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ ಎಂದು ಪತ್ರಕರ್ತರಾದ ಗಾರಾ.ಶ್ರೀನಿವಾಸ್ ಹೇಳಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿರುವ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕ್ಷೇತ್ರದಲ್ಲಿ ಮಾಧ್ಯಮದ ಪಾತ್ರ ಎನ್ನುವ ವಿಷಯ ಕುರಿತಾದ ವಿಚಾರ ಸಂಕೀರಣಕ್ಕೆ ವಾರದ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಮಾಧ್ಯಮ ಅಂದ ಕೂಡಲೇ ಅಂದು ಏಕತೆ ಇತ್ತು, ಮೌಲ್ಯವುಳ್ಳ ದನಿ ಇತ್ತು, ಸಂಘಟಿತವಾದ ಹೆಜ್ಜೆಗಳಿಂದ ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿಸಿತ್ತು, ಯಾವುದೇ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿ ಇತ್ತು, ಪ್ರಸ್ತುತ ದಿನಮಾನದಲ್ಲಿ ಎಲ್ಲವೂ ಶೂನ್ಯವಾಗಿದೆ, ಯಾವುದು ಇತ್ತು ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇವೋ..? ಅವೆಲ್ಲವೂ ಇಂದು ಇಲ್ಲವಾಗಿದೆ, ಎಲ್ಲಿದೆ ಮೌಲ್ಯ, ಎಲ್ಲಿದೆ ಸಾರ್ವಜನಿಕ ವಲಯದಲ್ಲಿ ಮೂಡಿಸಿದ ಭರವಸೆ ಎನ್ನುವ ಸಂಗತಿಗಳನ್ನು ಹುಡುಕುವ ದುರಂತಗಳು ಮಾದ್ಯಮದ ಮುಂದೆ ಎದುರಾಗಿ ಅಣುಕಿಸುತ್ತಿದ್ದರು ನಾವು ಪತ್ರಕರ್ತರು ಎನ್ನುವ ಬಿಗುಮಾನಗಳಿಗೇನು ಕೊರತೆ ಇಲ್ಲವಾಗಿದೆ ಎಂದು ಗಾರಾ.ಶ್ರೀನಿವಾಸ್ ಹೇಳಿದರು.
ಪತ್ರಿಕಾ ಅಭಿವ್ಯಕ್ತಿ ಎನ್ನುವುದು ಅವರವರ ವಿವೇಚನೆಗಳಿಗೆ ಒಳಪಟ್ಟಿರುವುದರಿಂದ ಇಂದು ಈ ಸ್ವಾತಂತ್ರ್ಯದ ಹರಣವಾಗುತ್ತಿದೆ, ಇದು ವಾಸ್ತವವಾಗಿದೆ, ಇಂತಹ ಸಂದಿಗ್ಧತೆಗಳ ನಡುವೆ ಸ್ಥಳೀಯ ಪತ್ರಿಕೆಗಳು ತಮ್ಮ ನೈಜ ಅಭಿವ್ಯಕ್ತಿಯನ್ನು ಉಳಿಸಿಕೊಂಡಿದೆ ಸಾರ್ವಜನಿಕವಾದ ಸ್ಪಂದನೆಗಳಿಗೆ ಹಾಗೂ ಜ್ವಲಂತ ಸಮಸ್ಯೆಗಳಿಗೆ ನೇರವಾಗಿ ದನಿಯಾಗುತ್ತಿದೆ ಎಂದು ಹೇಳಿದರಲ್ಲದೆ, ಆಡಳಿತ ವ್ಯವಸ್ಥೆಗಳನ್ನು ಎಚ್ಚರಿಸಿ ಸರಿಯಾದ ಕರ್ತವ್ಯ ಪಾಲನೆಗೆ ಅಣಿಯಾಗುವಂತಹ ವರದಿಗಳನ್ನು ಬಿತ್ತರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ನಾಗರೀಕ ವಲಯ ಪತ್ರಿಕೆಗಳ ಮೇಲಿನ ನಂಬಿಕೆಗಳನ್ನು ಕಳೆದುಕೊಂಡಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಬಹುದು ಎಂದು ಗಾರಾ.ಶ್ರೀನಿವಾಸ್ ಹೇಳಿದರು,
ಅವರು ಮುಂದುವರೆದಂತೆ ಪತ್ರಿಕಾ ಹಾದಿಯಲ್ಲಿ ನಡೆದು ಬಂದ ಹಾದಿಯನ್ನು ಹಾಗೂ ಸಾಹಿತ್ಯ ಲೋಕದ ಹೆಜ್ಜೆಗಳನ್ನು ವಿವರಿಸಿದರು, ಎಲ್ಲಾ ರಂಗಗಳಲ್ಲೂ ಇರುವಂತೆ ನಮ್ಮಲ್ಲಿಯೂ ಸ್ಪರ್ಧೆಗಳಿವೆ ಆದರೆ ನನ್ನ ಪತ್ರಿಕಾ ಬದುಕಿನಲ್ಲಿ ಆರೋಗ್ಯಕರವಾದ ಸ್ಪರ್ದೆಗಳಿರಲಿಲ್ಲ ಬದಲಿಗೆ ಅದು ಅನಾರೋಗ್ಯಕರವಾದ ಸ್ಪರ್ದೆಗಳು ಎದುರಾಗಿದ್ದವು ಬಹುಷ್ಯಃ ಇಂತಹದೊಂದು ಸನ್ನಿವೇಶಗಳು ಎದುರಾಗದಿದ್ದರೆ ಸುದ್ದಿ ಮತ್ತು ಸಾಹಿತ್ಯ ಲೋಕದಲ್ಲಿ ಇಷ್ಟೊಂದು ಭದ್ರವಾಗಿ ಬೇರೂರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರಲ್ಲದೆ, ಪ್ರತಿ ಬದುಕು ಅಧ್ಯಯನಶೀಲತೆ ಹೊಂದಿರಬೇಕು ನಾವುಗಳು ಬೇರೊಬ್ಬರನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಲಿ ತಮ್ಮೊಳಗಿನ ಆತ್ಮಾವಲೋಕನವನ್ನು ಮರೆಯಬಾರದು ಸ್ವತಃ ನಾವುಗಳು ಆತ್ಮವಂಚನೆಗಳೆಗೆ ಒಳಗಾಗದೆ, ಯಾವುದನ್ನು ಉತ್ಪ್ರೇಕ್ಷೆಗೊಳಿಸದೆ, ನಾನೂ ಕೂಡ ಸಮಾಜಕ್ಕೆ ಉದಾಹರಣೆಯಾಗಬೇಕು ಎನ್ನುವ ದೃಡ ಸಂಕಲ್ವ ಹೊಂದಬೇಕಿದೆ ಎಂದು ವಿವರಿಸಿದರು.
ಈ ಸದಂರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ " ಘಟಕದ ಅಧ್ಯಕ್ಷರಾದ ಓಂ ಗಣೇಶ್ ಹಾಗೂ ಕಾರ್ಯದರ್ಶಿ ಶಿವಕುಮಾರ್ ಪಿ.ಎಸ್, ರೋಟರಿಯನ್ ಗಳಾದ ಹೆಚ್.ಎಸ್ ವಾಗೀಶ್, ರೇವಣ ಸಿದ್ದಪ್ಪ, ಸುರೇಂದ್ರ, ಅಶೋಕ್ ಕುಮಾರ್, ವೆಂಕಟನಾರಾಯಣ ಭಟ್, ಹೆ.ಆರ್ ಲಕ್ಷ್ಮೀನಾರಾಯಣ್, ರಾಜಶೇಖರ್, ಅಶೋಕ್. ಲೋಕೇಶ್ವರಿ ಚೋಳಕೆ, ಉಮಾದೇವಿರವರುಗಳು ಉಪಸ್ಥಿತರಿದ್ದರು.
Comments
Post a Comment